ಸಣ್ಣಕಥೆ  : -
	ಗದ್ಯ ಸಾಹಿತ್ಯದ ಒಂದು ಪ್ರಕಾರ. ಇದು ನಿರ್ದಿಷ್ಟವಾದ ಲಕ್ಷಣಗಳನ್ನುಳ್ಳ ಸಾಹಿತ್ಯ ರೂಪ ಎನಿಸಿದುದು ಹದಿನೆಂಟನೆಯ ಶತಮಾನದ ಪ್ರಾರಂಭದಲ್ಲಿ ಎನ್ನಬಹುದಾದರೂ ಇದರ ಚರಿತ್ರೆ ವಾಸ್ತವವಾಗಿ ಬಹು ದೀರ್ಘವಾದುದು. ಕಥೆಯನ್ನು ಕೇಳಬೇಕೆನ್ನುವ ಚಪಲ, ತನ್ನ ಅನುಭವವನ್ನು ತೋಡಿಕೊಳ್ಳಬೇಕೆಂಬ ಚಪಲ-ಇವೆರಡೂ ಸೇರಿ ಕಥೆಯನ್ನು ನೂರಾರು ವರ್ಷಗಳ ಹಿಂದೆಯೆ ಸೃಷ್ಟಿಸಿದುವು. ಬರೆಹದಲ್ಲಿ ರೂಪತಾಳಿ ಉಳಿದು ಬಂದ ಕಥೆಗಳೇ ಇದರ ಚರಿತ್ರೆ ಮೂರೂವರೆ ಸಾವಿರ ವರ್ಷಗಳದು ಎಂಬುದನ್ನು ತೋರಿಸುತ್ತವೆ. ಈ ಕಥೆಗಳು ಬರುವ ಮುನ್ನ ನೂರಾರು ಕಥೆಗಳು ಪ್ರಚಾರದಲ್ಲಿದ್ದುವು ಎಂಬುದು ನಿಸ್ಸಂದೇಹ. ಹಳೆಯ ಒಡಂಬಡಿಕೆಯಲ್ಲಿ ಕಥೆಗಳನ್ನು ಕಾಣುತ್ತೇವೆ. ಈಜಿಪ್ಟ್‍ನಲ್ಲಿ ಕ್ರಿ.ಪೂ. 14ನೆಯ ಶತಮಾನದಲ್ಲಿ ಪ್ರಚಾರದ ಲ್ಲಿದ್ದ ಕಥೆಗಳು ದೊರೆತಿವೆ. ಬುದ್ಧ, ಯೇಸುಕ್ರಿಸ್ತರು ನೀತಿ ಕಥೆಯನ್ನು ತಮ್ಮ ಉಪದೇಶದ ಪ್ರಸಾರಕ್ಕಾಗಿ ಬಳಸಿದರು, ಅವರು ಹೇಳಿದ ಕಥೆಗಳಲ್ಲಿ ಕೆಲವು ಕಲಾತ್ಮಕ ಸೃಷ್ಟಿಗಳಾಗಿವೆ. ಭಾರತದ ಕಥಾಸರಿತ್ಸಾಗರ (11ನೆಯ ಶತಮಾನ) ಹೆಸರೇ ಸೂಚಿಸುವಂತೆ ಕಥೆಗಳ ಗಣಿ.

	ಸಣ್ಣಕಥೆ ಎನ್ನುವ ಹೆಸರು ಅಷ್ಟು ಸಮರ್ಪಕವಾದುದಲ್ಲ, ಇದು ಕೃತಿಯ ಉದ್ಧವೇ ಈ ಸಾಹಿತ್ಯ ವಿಭಾಗದ ಮುಖ್ಯ ಲಕ್ಷಣ ಎನ್ನುವ ಭಾವನೆಯನ್ನು ಉಂಟುಮಾಡುತ್ತದೆ. ಸಣ್ಣಕಥೆಯ ಉದ್ದಕ್ಕೆ ನಿರ್ದಿಷ್ಟವಾದ ಮಿತಿಯನ್ನು ಕಲ್ಪಿಸುವ ಪ್ರಯತ್ನಗಳೆಲ್ಲ ನಿರರ್ಥಕ ಎಂಬ ಅಭಿಪ್ರಾಯವಿದೆ. ಎಡ್ಗರ್ ಅಲನ್ ಪೋ ಸಣ್ಣ ಕಥೆ ಅರ್ಧ ಗಂಟೆಯಿಂದ ಎರಡು ಗಂಟೆಗಳೊಳಗೆ ಓದಿ ಮುಗಿಸುವಂತಿರಬೇಕು ಎನ್ನುತ್ತಾನೆ. ಒಬ್ಬೊಬ್ಬ ಓದುಗ ಓದುವ ವೇಗ ಒಂದೊಂದು ಬಗೆಯದು ಎನ್ನುವುದು ಮಾತ್ರವೆ ಈ ವಾದಕ್ಕೆ ಆಕ್ಷೇಪಣೆಯಲ್ಲ. ಓದಲು ಅರ್ಧ ಗಂಟೆಯನ್ನೂ ಬೇಡದ ಕೃತಿಗಳೂ ಉತ್ತಮ ಸಣ್ಣಕಥೆಗಳಾಗಿರಬಹುದು ಎನ್ನುವುದೊಂದು ಆಕ್ಷೇಪಣೆ. “ನನಗೆ ದೆವ್ವಗಳಲ್ಲಿ ನಂಬಿಕೆ ಇಲ್ಲ; ರೈಲಿನಲ್ಲಿ ಪ್ರಯಾಣಿಕನೊಬ್ಬ ತನ್ನ ಪಕ್ಕದಲ್ಲಿದ್ದವನಿಗೆ ಹೇಳಿದ. ಹಾಗೇನು? ಎಂದ ಎರಡನೆಯ ಪ್ರಯಾಣಿಕ ಅದೃಶ್ಯನಾದ” ಪ್ರಪಂಚದ ಅತ್ಯಂತ ಹೃಸ್ವವಾದ ಆದರೆ ಪರಿಣಾಮಕಾರಿಯಾದ ಸಣ್ಣಕಥೆಗಳಲ್ಲಿ ಇದು ಒಂದು. ಮುನ್ನೂರು ನಾಲ್ಕು ನೂರು ಪದಗಳಲ್ಲಿ ಅಡಕವಾಗಿರುವ ರವೀಂದ್ರರ ಕೆಲವು ಕಿರುಗತೆಗಳೂ ಸಣ್ಣಕಥೆಗಳೇ. ಮಾಸ್ತಿಯವರ ಮಸುಮತ್ತಿ ಸುಮಾರು ಐದು ಸಾವಿರ ಪದಗಳನ್ನು ಬಳಸುತ್ತದೆ. ಹೆನ್ರಿಯ “ದಿ ಗಿಫ್ಟ್ ಆಫ್ ದಿ ಮಾಗೈ” ಯಲ್ಲಿ ಸುಮಾರು ಎರಡು ಸಾವಿರ ಪದಗಳಿವೆ. ಹೆನ್ರಿ ಜೇಮ್ಸ್‍ನ “ದಿ ಟರ್ನ್ ಆಫ್ ದಿ ಸ್ಕ್ರೂ” ನಲ್ಲಿ ಸುಮಾರು ಮೂವತ್ತು ಸಾವಿರ ಪದಗಳಿವೆ.

	ಕಥಾವಸ್ತುವಿನ ಕೇಂದ್ರೀಕರಣ ಸಣ್ಣಕಥೆಯ ಮುಖ್ಯ ಲಕ್ಷಣ. ಕ್ಷಣಾರ್ಧ ಹೊಳೆದು ಒಂದು ದೃಶ್ಯವನ್ನು ಹೊಸ ರೀತಿಯಲ್ಲಿ ಕಣ್ಣಿಗೆ ತೋರಿಸುವ ಮಿಂಚಿನಂತೆಯೋ ರೋಮಾಂಚಕ ಸೌಂದರ್ಯವನ್ನು ತನ್ನಲ್ಲಿ ಹಿಂದಿಟ್ಟು ಕೊಂಡ ಕಾಮನಬಿಲ್ಲಿನ ಭಾಗದಂತೆಯೋ ಇದು ಭಾಸವಾಗುತ್ತದೆ. ಈ ಕೇಂದ್ರೀಕರಣದಲ್ಲಿ ಅದು ಭಾವಗೀತೆ ಮತ್ತು ಏಕಾಂತನಾಟಕದ ನಂಟ. ಕಾದಂಬರಿಯನ್ನು ಹೃಸ್ವಗೊಳಿಸಿ ಸಣ್ಣಕಥೆಯನ್ನಾಗಿ ಮಾರ್ಪಡಿಸುವುದಾಗಲಿ ಸಣ್ಣಕಥೆಯನ್ನು ಲಂಬಿಸಿ ಕಾದಂಬರಿಯನ್ನು ಸೃಷಿಸುವುದಾಗಲಿ ಸಾಧ್ಯವಿಲ್ಲವೆಂಬುದು ಎಲ್ಲರಿಗೂ ಪರಿಚಿತವಾದ ಮಾತು. ವಿಮರ್ಶಕರು ಕಾದಂಬರಿಗೂ ಸಣ್ಣಕಥೆಗೂ ಇರುವ ವ್ಯತ್ಯಾಸವನ್ನು ಸಂಕ್ಷೇಪವಾಗಿ ಹೇಳಲು ಬಹ್ವಂಶಗಳ ಐಕ್ಯ ಕಾದಂಬರಿಯದು. ಏಕಾಂಶದ ಐಕ್ಯ ಸಣ್ಣಕಥೆಯದು ಎಂದು ಹೇಳುತ್ತಾರೆ. ಡಬ್ಲ್ಯೂ.ಡಬ್ಲ್ಯೂ. ಜೇಕಬ್ಸ್‍ನ ದಿ ಮಂಕೀಸ್ ಪಾ, ರಾಮಚಂದ್ರಶರ್ಮರ ಸೆರಗಿನ ಕೆಂಡ ಮೊದಲಾದುವು ಸಣ್ಣ ಕಥೆಗಳಾಗಿಯೂ ಏಕಾಂತ ನಾಟಕಗಳಾಗಿಯೂ ಯಶಸ್ವಿಯಾಗಿವೆ. ಇದು ಸಾಹಿತ್ಯ ರೂಪಗಳ ನಿಕಟ ಬಾಂಧವ್ಯವನ್ನು ಸ್ಪಷ್ಟಗೊಳಿಸುತ್ತದೆ. ಪೂರ್ವನಿಶ್ಚಿತ ಭಾವನೆಯೊಂದನ್ನು ಸ್ಪಷ್ಟವಾಗಿ, ತೀಕ್ಷ್ಣವಾಗಿ ಮೂಡಿಸುವುದೇ ಉತ್ತಮ ಸಣ್ಣಕಥೆಯ ಲಕ್ಷಣ. ಕಾದಂಬರಿ ಈ ಬಗೆಯ ಕೇಂದ್ರೀಕರಣ ಮತ್ತು ಏಕತ್ವಕ್ಕೆ ಪ್ರಯತ್ನಿಸದು.

	ಕೇಂದ್ರೀಕರಣವೆ ಸಣ್ಣಕಥೆಯ ಮುಖ್ಯ ಲಕ್ಷಣ ಎಂದ ಮೇಲೆ ಇದರ ರಚನೆಗೆ ಕೃತಿಕಾರನು ವಿಶೇಷ ಗಮನವನ್ನು ಕೊಡಬೇಕೆಂಬುದು ಸ್ಪಷ್ಟ. ಕಾದಂಬರಿಯ ಬಂಧದಲ್ಲಿ ಅಲ್ಲಲ್ಲಿ ಬಿಗಿಯಿಲ್ಲದಿದ್ದರೂ ಕಟ್ಟುನಿಟ್ಟಾದ ದೃಷ್ಟಿಯಿಂದ ಅಗತ್ಯವೆನಿಸದ ಭಾಗಗಳಿದ್ದರೂ ಅದರ ಪರಿಣಾಮಕ್ಕೆ ಹೆಚ್ಚು ಕುಂದಾಗದಿರಬಹುದು. ಆದರೆ ಸಣ್ಣಕಥೆ ಬಿಲ್ಲಿನಿಂದ ಚಿಮ್ಮಿದ ಬಾಣದಂತೆ ನೇರವಾಗಿ ಗುರಿಯನ್ನು ಮುಟ್ಟಬೇಕು. ಆದ್ದರಿಂದ ಕಥೆಗಾರನ ವ್ಯಕ್ತಿತ್ವ ಕಲಾಪ್ರಜ್ಞೆ, ಸಾಮಗ್ರಿಯ ಆಯ್ಕೆ ಮೊದಲಾದ ತಂತ್ರಗಳ ನಿರ್ಧಾರದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಜೀವನದ ನಿರ್ದಿಷ್ಟರೂಪರಾಹಿತ್ಯವನ್ನು ಚಿತ್ರಿಸ ಹೊರಟ ಚೆಕಾವ್‍ನಂತಹ ಕಥೆಗಾರನೂ ತನ್ನ ಸಾಮಗ್ರಿಯನ್ನು ಎಚ್ಚರಿಕೆಯಿಂದ ಆರಿಸಬೇಕಾಗುತ್ತದೆ. ವಿವರಗಳನ್ನು ಉದ್ದೇಶಪೂರ್ವಕವಾಗಿ ಜೋಡಿಸಬೇಕಾಗುತ್ತದೆ. ಈ ವಿವರಗಳ ಮೂಲಕ ಒಂದು ಕಥೆ-ಯಾವುದಾದರೊಂದು ಆಂತರಿಕ ಕ್ರಮವನ್ನು ಸೂಚಿಸುವಂತೆ ಜೋಡಿಸಲ್ಪಟ್ಟ ಘಟನೆಗಳ ಸರಪಳಿ-ಪ್ರತ್ಯಕ್ಷವಾಗಬೇಕು. ಕಥೆಯ ಬಿಡಿ ಅಂಶ ಎಷ್ಟೇ ತೆಳುವಾಗಿರಲಿ, ಅಂತೂ ಕಥೆಯೊಂದು ಬೆಳೆದುಕೊಂಡು ಹೋಗಬೇಕು. ಇಲ್ಲದಿದ್ದರೆ ಕೃತಿ ಕೇವಲ ನುಡಿಚಿತ್ರವಾಗಿ ಉಳಿಯುತ್ತದೆ. ಕೃತಿಯ ವಸ್ತು, ಪಾತ್ರ, ಆವರಣ ಈ ಮೂರು ಅಂಶಗಳಿಗೆ ಕೃತಿಕಾರ ತನ್ನ ಉದ್ದೇಶಕ್ಕನುಗುಣವಾಗಿ ಪ್ರಾಮುಖ್ಯ ನೀಡಿ ಬಳಸಿಕೊಳ್ಳಬೇಕು. ಕೃತಿಯ ಶೈಲಿ ಸಣ್ಣಕಥೆಯಲ್ಲಿ ಬಹು ಮುಖ್ಯವಾದ ಅಂಶ. ಭಾಷೆಯ ಎಚ್ಚರದ ಬಳಕೆ ಭಾವಗೀತೆಯಲ್ಲಿ ಅಷ್ಟೆ ಮುಖ್ಯವಾದುದು. ಭಾಷೆಯೇ ಕಥೆಗಾರ ನಿರ್ಧರಿಸಿರುವ ಮನ:ಸ್ಥಿತಿಯನ್ನು ವ್ಯಕ್ತಪಡಿಸುವ ಮಾಧ್ಯಮ. ಜೇಮ್ಸ್ ಜಾಯ್ಸ್, ವರ್ಜೀನಿಯ ವುಲ್ಫ್, ಹೆನ್ರಿ ಜೇಮ್ಸ್, ಡೋರಥಿ ಪಾರ್ಕರ್ ಮೊದಲಾದ ಪಾಶ್ಚಾತ್ಯ ಕಥೆಗಾರರ ಮತ್ತು ಶ್ರೀಪತಿ, ರಾಮಚಂದ್ರಶರ್ಮ, ಸದಾಶಿವ, ರಾಜಲಕ್ಷ್ಮಿ ಮೊದಲಾದ ಕನ್ನಡ ಕಥೆಗಾರರ ಕೃತಿಗಳ ಅಭ್ಯಾಸ ಇದನ್ನು ಸ್ಪಷ್ಟಗೊಳಿಸುವುದು. ಇದರಿಂದಲೆ ವಿಲಿಯಂ ಸರೋಯನ್‍ನಂತಹ ವಿಮರ್ಶಕ “ಸಣ್ಣಕಥೆ ಶುದ್ಧ ಶೈಲಿಯಲ್ಲದೆ ಬೇರೇನೂ ಆಗಿರಲು ಸಾಧ್ಯವಿಲ್ಲ ಎನ್ನುತ್ತಾನೆ. ಶಬ್ದಗಳ ಈ ಎಚ್ಚರಿಕೆಯ, ಸೂಕ್ಷ್ಮದ ಬಳಕೆ ಓದುಗನಿಂದ ವಿಶೇಷವಾದ ಶ್ರದ್ಧೆ ಮತ್ತು ಸೂಕ್ಷ್ಮತೆಯನ್ನು ನಿರೀಕ್ಷಿಸುತ್ತದೆ.

	ಫ್ರಾಂಕ್ ಒಕಾನರ್ ಸಣ್ಣಕಥೆಯ ಜನ್ಮ ಮತ್ತು ಬೆಳೆವಣಿಗೆಗೆ ಒಂದು ಬಗೆಯ ಸಮಾಜ ಸಹಾಯಕವಾಗಿರುತ್ತದೆ ಎಂದು ಸೂಚಿಸಿದ್ದಾನೆ. ಘಟನೆಗಳನ್ನು ಅಥವಾ ಸನ್ನಿವೇಶಗಳನ್ನು ಕ್ಷಣಮಾತ್ರ ದೃಷ್ಟಿಸುವ ಅವಕಾಶ ನೀಡುವ ಆದರೆ ಬಾಳು ಪರಿಪಕ್ವವಾಗುವುದನ್ನು ಅನುಭವಿಸಲು ಅವಕಾಶ ನೀಡದ ಸಮಾಜಗಳಲ್ಲಿ ಸಣ್ಣಕಥೆಯ ಶ್ರೀಮಂತ ಬೆಳೆ ಸಾಧ್ಯ. ಐರ್ಲೆಂಡ್, ರಷ್ಯ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಇದಕ್ಕೆ ನಿದರ್ಶನ. ಅಖಂಡವಾದ ದೀರ್ಘಕಾಲದ ಸಾಂಸ್ಕøತಿಕ ಬೆಳೆವಣಿಗೆ ಕಂಡುಬರುವ ಇಂಗ್ಲೆಂಡ್ ಮತ್ತು ಫ್ರಾನ್ಸ್‍ನಂತಹ ದೇಶಗಳಲ್ಲಿ ಅಂತರ್ಚೇತನ ಪಕ್ವವಾಗಲು ಸಾಧ್ಯವಿದೆ, ಇಂತಹ ದೇಶಗಳಲ್ಲಿ ಕಾದಂಬರಿ ಬೆಳೆಯುತ್ತದೆ ಎಂಬುದು ಈತನ ವಾದ. ಆದರೆ ಸಣ್ಣಕಥೆಗೆ ಇಂತಹ ಮಿತಿಯನ್ನು ಕಲ್ಪಿಸಲು ಸಾಧ್ಯವಿಲ್ಲ. ಇಂಗ್ಲೆಂಡ್ ಮತ್ತು ಫ್ರಾನ್ಸ್‍ನ ಶ್ರೀಮಂತ ಸಣ್ಣಕಥಾ ಸಾಹಿತ್ಯವನ್ನೂ ನಾಲ್ಕು ದಶಕಗಳಿಗೂ ಮೀರಿದ ಅವಧಿಯಲ್ಲಿ ಶ್ರೀನಿವಾಸರು ರಚಿಸಿದ ಸಣ್ಣಕಥೆಗಳು ಒಂದು ಪರಿಪಕ್ವ ಚೇತನದ ಕನ್ನಡಿಗಳೆಂಬುದನ್ನೂ ಇಲ್ಲಿ ಸ್ಮರಿಸಬಹುದು. ಆಧುನಿಕ ಜೀವನದ ವೇಗಕ್ಕೆ ಸಣ್ಣಕಥೆ ಕೆಲವೇ ನಿಮಿಷಗಳಲ್ಲಿ ಓದಿ ಮುಗಿಸಬಹು ದಾದ ಬರೆಹವಾಗಿ ಹೊಂದಿಕೊಂಡಿದೆ. ಆದುದರಿಂದ ಆಧುನಿಕ ಯುಗದಲ್ಲಿ ಸಣ್ಣಕಥೆ ಬೆಳೆದಿದೆ ಎನ್ನುವ ಅಭಿಪ್ರಾಯ ಅರ್ಧಸತ್ಯ. ಎಲ್ಲ ದೇಶಗಳಲ್ಲಿಯೂ ಇಂದು ಸಣ್ಣಕಥೆಗಿಂತ ಕಾದಂಬರಿಗೆ ಮಾರುಕಟ್ಟೆ ಅನುಕೂಲವಾಗಿದೆ. ಆದರೆ ಇಂದಿನ ಪ್ರಪಂಚದ ಓದುಗನಿಗೆ ಪ್ರಯಾಣದ ವೇಳೆಯ ಅಲ್ಪ ವಿರಾಮದಲ್ಲಿ ಸಣ್ಣಕಥೆಯನ್ನು ಓದಿ ಮುಗಿಸಲು ಮಾತ್ರ ಸಾಧ್ಯವಿದೆ. ಈ ಬಗೆಯ ಓದುಗರಿಗೇ ಮೀಸಲಾದ ಕಥೆಗಳು, ಪತ್ರಿಕೆಗಳಲ್ಲಿ ಬರುವ ಕಥೆಗಳೂ ಸಣ್ಣಕಥೆಯ ಬೆಳೆವಣಿಗೆಗೆ ಸಹಾಯಕವಾಗಿವೆ. ಇದರಿಂದ ಅನನುಕೂಲವೂ ಉಂಟು. ಓದುಗರ ಅಭಿರುಚಿ ಸಣ್ಣಕಥೆಯ ಬೆಳವಣಿಗೆಯ ಮೇಲೆ ಪ್ರಭಾವವನ್ನು ಬೀರಿದೆ. ಓ ಹೆನ್ರಿಯ ಕಥೆಗಳಲ್ಲಿ ಕಾಣುವಂತೆ ವಿಸ್ಮಯಕರ ಮುಕ್ತಾಯ, ಚಮತ್ಕಾರಗಳಿಗೆ ಅತಿ ಪ್ರಾಶಸ್ತ್ಯವನ್ನು ತಂದುಕೊಟ್ಟಿದೆ.

	ಸಣ್ಣಕಥೆ ಗಾತ್ರದಲ್ಲಿ ಮಿತವಾಗಿದ್ದರೂ ಅದು ಸಾಧಿಸಬಹುದಾದ, ಸಾಧಿಸಿರುವ ವೈವಿಧ್ಯ ಅಚ್ಚರಿಯನ್ನುಂಟುಮಾಡುವಂತಹುದು. ಅದು ದೀರ್ಘವೂ ಸೂಕ್ಷ್ಮವೂ ಆದ ಮನೋವಿಶ್ಲೇಷಣೆಯನ್ನಾಗಲಿ ಸ್ವಭಾವದಲ್ಲಿ ನಿಧಾನವಾದ ಮಾರ್ಪಾಡನ್ನಾಗಲಿ ನಿರೂಪಿಸಲಾರದು; ಮನುಷ್ಯ ಸ್ವಭಾವದಲ್ಲಿನ ಕೊಂಕನ್ನು ಎತ್ತಿ ತೋರಿಸಬಹುದು. ಅದು, ಚಾಲ್ ದ ನ್ಯೂಫ್ (ಮೊಪಾಸ) ನಲ್ಲಿ ಮಾಡುವಂತೆ, ಇಲ್ಲವೆ ಒಂದು ಪರಿಪಕ್ವ ಬಾಳಿನ ದರ್ಶನದ ಸಾರಸಂಗ್ರಹವಾಗಬಹುದು, ಮಂತ್ರೋದಯ (ಶ್ರೀನಿವಾಸ)ದಂತೆ, ಒಂದು ಹೃದಯವನ್ನು ನಮ್ಮ ಮುಂದೆ ಬಿಚ್ಚಿಡ ಬಹುದು, ಕಾಬೂಲಿವಾಲಾ (ರವೀಂದ್ರ) ದಂತೆ, ಸೆರಗಿನ ಕೆಂಡ (ರಾಮಚಂದ್ರಶರ್ಮ) ದಂತೆ ಮನಸ್ಸಿನ ಒಂದು ವಿಶೇಷ ಸ್ಥಿತಿಯನ್ನು ಪ್ರತಿಬಿಂಬಿಸಬಹುದು. ಜೀವನದ ವೈಚಿತ್ರ್ಯವನ್ನು ನಮ್ಮ ಕಣ್ಣು ಮುಂದೆ ನಿಲ್ಲಿಸಬಹುದು.	  

  (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ